ಅಭಿಪ್ರಾಯ / ಸಲಹೆಗಳು

ವೀರಗಾಸೆ ನೃತ್ಯ

ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ವೀರರಸ ಪ್ರಧಾನವಾದ ಧಾರ್ಮಿಕ ಕುಣಿತ. ಇಬ್ಬರಿಂದ ಮೂವತ್ತರವರೆಗೆ ಕಲಾವಿದರ ಸಂಖ್ಯೆ ಇರುತ್ತದೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ಇದರಲ್ಲಿ ಪಂಚವಾದ್ಯಗಳು ಬಳಕೆಯಾಗುತ್ತವೆ. : ತಾಲ, ಶ್ರುತಿ, ಸಂಬಾಳ, ಮೋರಿ ಹಾಗೂ ಕರಡೆವಾದ್ಯ

ಈ ಕಲೆಗೆ ಹಿನ್ನೆಲೆಯಾಗಿ ಒಂದು ಪೌರಾಣಿಕ ಕಥೆ ಇದೆ: ದಕ್ಷ ಬ್ರಹ್ಮನು ಆಚರಿಸಿದ ಒಂದು ಯಾಗಕ್ಕೆ ಶಿವನೊಬ್ಬನನ್ನು ಬಿಟ್ಟು ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆ ಎಂದು ಭಾವಿಸಿದ ಪಾರ್ವತಿಯು ವ್ಯಗ್ರಳಾಗಿ ತಂದೆಯಲ್ಲಿ ನ್ಯಾಯ ಕೇಳಲು ಗಂಡ ಬೇಡವೆಂದರೂ ಕೇಳದೆ ದಕ್ಷಬ್ರಹ್ಮನಲ್ಲಿಗೆ ಬರುತ್ತಾಳೆ. ಮಗಳೆಂಬ ಮಮತೆಯನ್ನು ತೊರೆದು ದಕ್ಷಬ್ರಹ್ಮ ಪಾರ್ವತಿಯ ಎದುರಿನಲ್ಲೇ ಶಿವನನ್ನು ನಿಂದಿಸುತ್ತಾನೆ. ಪತಿನಿಂದನೆಯನ್ನು ಸಹಿಸಲಾರದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಅಸುನೀಗುತ್ತಾಳೆ. ಈ ಘಟನೆಯಿಂದ ಕೋಪಗೊಂಡ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನೂ ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ 101 ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಎಲ್ಲವನ್ನು ನಾಶಪಡಿಸುವಾಗ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ.

ಇದರಲ್ಲಿ ಭಾಗವಹಿಸುವ ಕಲಾವಿದರ ವೇಷಭೂಷಣಗಳು ಹೀಗಿರುತ್ತವೆ: ಬಿಳಿಯ ಪಂಚೆಯ ವೀರಗಚ್ಚೆ, ತಲೆಗೆ ಅರಿಶಿನ ಅಥವಾ ನೀಲಿಬಣ್ಣದ ರುಮಾಲು, ಕಾವಿಬಣ್ಣದ ಕಸೆಯಂಗಿ, ಕೊರಳಲ್ಲಿ ರುದ್ರಾಕ್ಷಿಸರ ಹಣೆಗೆ ವಿಭೂತಿ, ಕಿವಿಯಲ್ಲಿ ಕುಂಡಲ, ಸೊಂಟಕ್ಕೆ ಸೊಂಟಪಟ್ಟಿ, ಕೈಯಲ್ಲಿ ಬಿಚ್ಚುಗತ್ತಿ, ಕಾಲಲ್ಲಿ ಗೆಜ್ಜೆ.

“ಅಹ ರುದ್ರಾ ಅಹಹಾ ದೇವಾ….” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ನಾಲ್ಕೈದು ಗತಿಗಳಿರುವ ವೀರಗಾಸೆ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಹಬ್ಬ ಹರಿದಿನಗಳಲ್ಲಿ ತೇರು ಜಾತ್ರೆಗಳಲ್ಲಿ, ಮದುವೆ ಮನೆದೇವರ ಉತ್ಸವಗಳಲ್ಲಿ ವೀರಗಾಸೆ ಕುಣಿತವನ್ನು ಏರ್ಪಡಿಸುವ ಸಂಪ್ರದಾಯವಿದೆ.

ವೀರಗಾಸೆ ನೃತ್ಯಕ್ಕೆ ಸಂಬಂಧಿಸಿದ ಛಾಯಾಚಿತ್ರಗಳ ಲಿಂಕ್‌

ಇತ್ತೀಚಿನ ನವೀಕರಣ​ : 11-08-2023 12:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080